Tuesday, November 29, 2011

ನೀ ಬಾರೆಯಾ ?


ಹೊತ್ತು ಹೊತ್ತೇರುತಿದೆ

ಮತ್ತು ಮತ್ತೇರುತಿದೆ

ದಹಿಸುತಿರುವ ದಾಹವಿದು

ತೀರಿಸಲು ನೀ ಬಾರೆಯಾ ?


ನಿನಗಾಗಿ ಕಾತರಿಸಿ ಕಾದಿದೆ

ಈ ನನ್ನ ಮನವು

ಬಾ ಒಮ್ಮೆ ಅಪ್ಪಿಕೊ

ನನ್ನ ನೀ ಒಪ್ಪಿಕೊ


ಉಸಿರುಸಿರಿಗೂ ನಿಟ್ಟುಸಿರು

ಅನುದಿನದ ಹಗಲಿರುಳು

ವಿರಹದಗ್ನಿ ಮನವ ಸುಡುತಿದೆ

ಅಮೃತವರ್ಷಿಣಿ ನೀ ಬಾರೆಯಾ ?


ನಿನ್ನ ನೆನಪು ಸೆಳೆಯುತಿಹುದು

ಈ ಕ್ಷಣಕೆ ಅದರ ಮರುಕ್ಷಣಕೆ

ವಯಸ್ಕಾಂತದ ಸೆಳತವಿದು

ನೀ ಚುಂಬಕ ನನ್ನ ಮನದ ಕಬ್ಬಿಣಕೆ


ಮೊದಲ ಮಳೆಹನಿಗೆ ಪರಿತಪಿಸುತಿದೆ

ಈ ನನ್ನ ಮನದ ಮರಭೂಮಿ

ಸರಸ ಸಮುದ್ರವ ಮಥಿಸುತಿರುವೆ

ರಸಸುಧೆಯೆ ನೀ ಬಾರೆಯಾ ?

Thursday, November 10, 2011

ಮೌನದಲ್ಲೇನೇನೂ ಇಲ್ಲ...!


ಮೌನದಲೆ ಬರೆದೆ ಕವನ
ಶಬ್ದವಿಲ್ಲ ರಾಗವಿಲ್ಲ
ತಾಳವಂತೂ ಇಲ್ಲವೇ ಇಲ್ಲ
ಪ್ರಾಸ ಅನುಪ್ರಾಸದ ಹಂಗಿಲ್ಲ
ಇದು ಅಚ್ಛಾಗುವ ಇಚ್ಛೆ
ಸ್ವಲ್ಪವೂ ನನಗಿಲ್ಲ

ಮೌನದಲೆ ಬರೆದೆ ಕವನ
ಇದನಾರು ಓದುವರೊ ಗೊತ್ತಿಲ್ಲ
ಓದಿ ಮೆಚ್ಚದಿದ್ದರೂ ಪರವಾಗಿಲ್ಲ
ಹೊಗಳಿಕೆಯಂತು ಬೇಕೆ ಆಗಿಲ್ಲ
ಇದು ಅಮರವಾಗಲಿ ಎಂಬ
ಹಾರೈಕೆ ನನ್ನದಲ್ಲ

ಮೌನದಲೆ ಬರೆದೆ ಕವನ
ಆದಿಯಿಲ್ಲ ಅಂತ್ಯವಿಲ್ಲ
ಶೂನ್ಯವಂತೂ ಇದಲ್ಲ
ಮೌನಕ್ಕೆ ಬೆಲೆಯೆಂಬುದಿಲ್ಲ
ಇದು ಅಮೂಲ್ಯವಾಗಲಿ ಎಂಬ
ಬಯಕೆ ನನಗಿಲ್ಲ

ಮೌನದಲೆ ಬರೆದೆ ಕವನ
ನೋವಿಲ್ಲ ನಲಿವಿಲ್ಲ
ಭಾವವಂತೂ ಇಲ್ಲವೇ ಇಲ್ಲ
ಮೌನದಲ್ಲೇನೇನೂ ಇಲ್ಲ
ಇದು ಶಾಶ್ವತವಾಗಿರಲಿ ಎಂಬ
ಕೋರಿಕೆ ನನ್ನದಲ್ಲ

Monday, November 7, 2011

ಆಶಾ ಭಾವನೆ...!



ತುಸು ತಾಳು ಎಲೇ ಮನವೆ
ಅದೇಕೆ ನೀ ಈ ರೀತಿ ರೋಧಿಸುವೆ ?
ಜೀವನದ ಚಕ್ರಗಳು ತಿರುಗುತಲಿವೆ
ಒಂದಿಲ್ಲೊಂದು ದಿನ ನೀ ಮೇಲೆ ಬರುವೆ

ತುಸು ಧೈರ್ಯದಿಂದಿರು ಎಲೇ ಮನವೇ
ಅದೇಕೆ ನೀ ಈ ರೀತಿ ನಡಗುವೆ ?
ಕತ್ತಲೆ ಕಳೆದು ಬೆಳಕು ಮೂಡಲಿದೆ
ಅದೋ ನೋಡು, ಸೂರ್ಯ ಕೆಂಪು ರಥವೇರಿದೆ

ತುಸು ಮೌನದಿಂದಿರು ಎಲೇ ಮನವೆ
ಅದೇಕೆ ನೀ ಈ ರೀತಿ ಊಳಿಡುವೆ ?
ಇಂಪಾದ ದನಿಯಲಿ ಕೋಗಿಲೆಯು ಉಲಿಯಲಿದೆ
ನಿನ್ನ ಮನವನದು ತಣಿಸಲಿದೆ

ತುಸು ತಂಪಾಗಿರು ಎಲೇ ಮನವೆ
ಅದೇಕೆ ನೀ ಈ ರೀತಿ ದಹಿಸುವೆ ?
ಮನದ ಮರಭೂಮಿಯಲಿ ಓಯಾಸಿಸ್ ಚಿಮ್ಮಲಿದೆ
ನಿನ್ನ ದಾಹವನದು ತೀರಿಸಲಿದೆ

Thursday, October 27, 2011

ಸ್ಫೂರ್ತಿ ನೀನು...!


ತಂಗಾಳಿಯೊಂದಿಗೆ ತೇಲಿ ಬಂದ
ಸುವಾಸನೆಯ ಸುಗಂಧ ನೀನು
ರೆಪ್ಪೆಯಂಚಿನಿಂದ ಕೆನ್ನೆಗೆ ಜಾರಿದ
ತಿಳಿ ಕಂಬನಿಯ ಹನಿಯು ನೀನು

ನನ್ನರಿವಿನ ಅಂತರಾಳದಲಡಗಿರುವ
ಬಿಡಿಸಲಾಗದ ಕಗ್ಗಂಟು ನೀನು
ರಾತ್ರಿ ಕಂಡ ಕಲ್ಪನೆಯ ಕನಸಿನ
ಸಾಕಾರ ಪ್ರತಿರೂಪ ನೀನು

ಕಪ್ಪೆ ಚಿಪ್ಪಿನಲಿ ಬಚ್ಚಿಟ್ಟು ಕುಳಿತ
ಸ್ವಾತಿ ಮಳೆ ಹನಿಯ ಮುತ್ತು ನೀನು
ನೀನೇ ನೀನಾಗಿ ಒಲಿದು ಬಂದ
ಚಲುವಿನ ಒಲವ ಧಾರೆ ನೀನು

ಕಣ್ಣು ಹೊಡೆಯುವ ಕೋಟಿ ನಕ್ಷತ್ರಗಳ
ಚಿರನೂತನ ಬೆಳಕು ನೀನು
ಎಲ್ಲೆಲ್ಲೂ ಪರಿಮಳ ಹೊರ ಸೂಸುವ
ಅರಳು ಮಲ್ಲಿಗೆಯ ಹೂವು ನೀನು

ಒಲವು ನೀನು ಚಲುವು ನೀನು
ನನ್ನೆದೆಯ ಉಸಿರು ನೀನು
ನೋವು ನೀನು ನಲಿವು ನೀನು

ನನ್ನ ಕವನಕೆ ಸ್ಫೂರ್ತಿ ನೀನು...!