Thursday, October 27, 2011

ಸ್ಫೂರ್ತಿ ನೀನು...!


ತಂಗಾಳಿಯೊಂದಿಗೆ ತೇಲಿ ಬಂದ
ಸುವಾಸನೆಯ ಸುಗಂಧ ನೀನು
ರೆಪ್ಪೆಯಂಚಿನಿಂದ ಕೆನ್ನೆಗೆ ಜಾರಿದ
ತಿಳಿ ಕಂಬನಿಯ ಹನಿಯು ನೀನು

ನನ್ನರಿವಿನ ಅಂತರಾಳದಲಡಗಿರುವ
ಬಿಡಿಸಲಾಗದ ಕಗ್ಗಂಟು ನೀನು
ರಾತ್ರಿ ಕಂಡ ಕಲ್ಪನೆಯ ಕನಸಿನ
ಸಾಕಾರ ಪ್ರತಿರೂಪ ನೀನು

ಕಪ್ಪೆ ಚಿಪ್ಪಿನಲಿ ಬಚ್ಚಿಟ್ಟು ಕುಳಿತ
ಸ್ವಾತಿ ಮಳೆ ಹನಿಯ ಮುತ್ತು ನೀನು
ನೀನೇ ನೀನಾಗಿ ಒಲಿದು ಬಂದ
ಚಲುವಿನ ಒಲವ ಧಾರೆ ನೀನು

ಕಣ್ಣು ಹೊಡೆಯುವ ಕೋಟಿ ನಕ್ಷತ್ರಗಳ
ಚಿರನೂತನ ಬೆಳಕು ನೀನು
ಎಲ್ಲೆಲ್ಲೂ ಪರಿಮಳ ಹೊರ ಸೂಸುವ
ಅರಳು ಮಲ್ಲಿಗೆಯ ಹೂವು ನೀನು

ಒಲವು ನೀನು ಚಲುವು ನೀನು
ನನ್ನೆದೆಯ ಉಸಿರು ನೀನು
ನೋವು ನೀನು ನಲಿವು ನೀನು

ನನ್ನ ಕವನಕೆ ಸ್ಫೂರ್ತಿ ನೀನು...!

ನನ್ನ ಕನಸು...!



ಇರಬಹುದು
ನಿನಗೆ

ನಿನ್ನದೇ ಆದ
ಹತ್ತು ಹಲವಾರು
ಬೇರೆ ಬೇರೆ
ಬಣ್ಣ ಬಣ್ಣದ ಕನಸುಗಳು
ಆದರೆ ನನಗೆ
ನೀನೇ
ನನ್ನ ಕನಸು...!

ಕಣ್ಣೀರ ಧಾರೆ...!



ಮಂಜಿನಂತೆ
ಇತ್ತು
ನನ್ನ
ಮನಸ್ಸು
ಬೇಡ ಬೇಡವೆಂದರೂ
ಕೇಳದೆ
ಕರಗಿಸಿ ಆವಿಯಾಗಿಸಿದೆ
ಈಗ
ನೋಡು
ಮಳೆಯಾಗಿ
ಸುರಿಯುತಿದೆ
ಕಣ್ಣೀರ
ಧಾರೆ...!

ಕುರುಡು ಪ್ರೀತಿಯ ಬಲೆ...!




ಯಾವ ಹಾಡು ಹಾಡಿ
ನನ್ನ ಮನವ ಸಂತೈಸಲಿ ?
ನೋವು ನುಂಗಿ ನಗುವ ಕಲೆಯ
ಹೇಗೆ ನಾನು ಕಲಿಯಲಿ ?

ಜೊತೆಗಿದ್ದ ನೆರಳು ಕೂಡಾ
ಮರೆಯಾಯಿತು ಕತ್ತಲೆಯಲಿ
ಸಿಹಿಯಾಗಿ ಶುರುವಾದ ಗೆಳೆತನ
ಕೊನೆಯಾಯಿತು ಹಗೆಯಲಿ

ಜೋತೆಗಿರುವೆನೆಂದು ದೂರವಾದವರ
ಹೇಗೆ ನಾನು ಮರೆಯಲಿ ?
ಪ್ರೀತಿಯೇ ಇಲ್ಲದ ಮೇಲೆ
ಇನ್ನೇಕೆ ನಾನು ಬದುಕಲಿ ?

ಕಣ್ಣೀರಧಾರೆ ಅವಿರತ ಸುರಿದು
ನೆನಪುಗಳೆಲ್ಲ ಅಳಿದು ಹೋಗಲಿ
ಸಿಲುಕದಿರಲಿ ಮತ್ತೆಂದಿಗೂ ಮನವು
ಕುರುಡು ಪ್ರೀತಿಯ ಬಲೆಯಲಿ...!